ರಾಮಾನುಜ ಅಯ್ಯಂಗಾರ್, ಅರಿಯಕುಡಿ
1890-1967. ಕರ್ನಾಟಕ ಸಂಗೀತಸಾಮ್ರಾಜ್ಯದ ದಿಗ್ಗಜಗಳ ಪೈಕಿ ಒಬ್ಬರು. ಆ ಕ್ಷೇತ್ರದ ಅಧ್ವರ್ಯು. ಐದು ದಶಕಗಳಿಗೂ ಹೆಚ್ಚುಕಾಲ ಸಂಗೀತಲೋಕದಲ್ಲಿ ಅತ್ಯಂತ ಗೌರವಾನ್ವಿತ ಸಾರ್ವಭೌಮರಾಗಿ ರಾರಾಜಿಸಿದರು. ವೀಣಾಧನಂ (ವೀಣಾಧನಮ್ಮಾಳ್). ಟೈಗರ್ ವರದಾಚಾರ್ಯ, ಕಾಂಚೀಪುರಂ ನಾಯನಾಪಿಳ್ಳೆ, ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಜಿ.ಎನ್.ಬಾಲಸುಬ್ರಹ್ಮಣ್ಯ, ಮಧುರೈಮಣಿ ಅಯ್ಯರ್ ಮುಂತಾದ ಸಂಗೀತದ ಮಹಾರಥಿಕರು ತಮ್ಮ ಸಂಗೀತ ಶ್ರೀಮಂತಿಕೆಯನ್ನು ಮೆರೆದ ಕಾಲವದು.

	ರಾಮಾನುಜ ಅಯ್ಯಂಗಾರರ ತಂದೆ ತಿರುವೇಂಗಡತ್ತಂ ಅಯ್ಯಂಗಾರ್ ಅವರು ವೇದ, ಶಾಸ್ತ್ರಗಳು, ಸಂಸ್ಕøತ ಮತ್ತು ತಮಿಳು ವಿದ್ವಾಂಸರಾಗಿದಲ್ಲದೆ ಖ್ಯಾತ ಜ್ಯೋತಿಷ್ಯವಿದ್ವಾಂಸರೂ ಆಗಿದ್ದರು. ಜ್ಯೋತಿಷ್ಯ ಅವರ ಮನೆತನದ ವಿದ್ಯೆಯಾಗಿದ್ದು ಅದರಿಂದ ಉತ್ತಮ ವರಮಾನವಿದ್ದುದರಿಂದ ಅನುಕೂಲಸ್ಥರಾಗಿಯೂ ಇದ್ದರು. ಅವರ ಹುಟ್ಟೂರಾದ ಅರಿಯಕುಡಿಗ್ರಾಮಕ್ಕೆ ಸಮೀಪದಲ್ಲಿ ತಮಿಳುನಾಡಿನ ಬೆಟ್ಟನಾಡಿನ ದೇವಕೋಟೆಯಲ್ಲಿ ವಾಸವಾಗಿದ್ದರು. ಅರಿಯಕುಡಿಯವರ ತಾಯಿ ನಾಚಿಯಾರ್ ಅಮ್ಮಾಳ್ (ಚೆಲ್ಲಮ್ಮಾಳ್). ತಮಿಳುನಾಡಿನ ರಾಮಾನಾಥಪುರಂ ಜಿಲ್ಲೆಯ ಕಾರೈಕ್ಕುಡಿಗೆ ಸಮೀಪದಲ್ಲಿರುವ ಅರಿಯಕುಡಿಯ ಬಳಿ ವಾಸವಾಗಿದ್ದ ಈ ಶ್ರೀವೈಷ್ಣವ ಸಂಪ್ರದ್ರಾಯಸ್ಥ ದಂಪತಿಗಳ ಮೂರನೆಯ ಪುತ್ರನಾಗಿ ರಾಮಾನುಜ ಅಯ್ಯಂಗಾರ್ ಅವರು 1890 ಮೇ 19ರಂದು ಜನಿಸಿದರು. ಇವರಿಗೆ ಮೂರು ಮಂದಿ ಸಹೋದರರು ಮತ್ತು ಮೂವರು ಸಹೋದರಿಯರಿದ್ದರು.

	ರಾಮಾನುಜ ಅಯ್ಯಂಗಾರರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಬಲು ಆಸಕ್ತಿಯಿತ್ತು. ಅದನ್ನು ಕೇಳುತ್ತಿದ್ದುದರಲ್ಲದೆ ಮನೆಯಲ್ಲಿ ಯಾವಾಗಲೂ ಯಾವುದಾದರೊಂದು ಹಾಡನ್ನು ಮೆಲ್ಲನೆ ಹೇಳಿಕೊಳ್ಳುತ್ತಿದ್ದುದನ್ನು ತಂದೆ ಗಮನಿಸಿದ್ದರು. ಕೂಡಲೇ ಸಂಗೀತಶಿಕ್ಷಣವನ್ನು ಏರ್ಪಡಿಸಿದರು. ದೊಡ್ಡಪ್ಪ ಅಪ್ಪುಸ್ವಾಮಿಯವರಿಗೆ ಸಂತಾನವಿಲ್ಲದ್ದರಿಂದ ಅವರು ಈ ಬಾಲಕನನ್ನು ದತ್ತು ಸ್ವಿಕಾರ ಮಾಡಿದರು. ಆದರೆ ಅಪ್ಪುಸ್ವಾಮಿಯವರು ಕೆಲವು ವರ್ಷಗಳಲ್ಲೇ ಕಾಲವಾದರು. ಇದರಿಂದ ಮನಸ್ಸಿಗೆ ಆದ ಆಘಾತದ ಪರಿಹಾರಾರ್ಥ ಮನೆಯ ಹಿರಿಯರೆಲ್ಲ ಕಾಶಿಯಾತ್ರೆ ಕೈಗೊಂಡರು. ಇದಾದ ಬಳಿಕ ತಿರುವೇಂಗಡತ್ತಂ ಅವರು ಮಗನಿಗೆ ಉಪನಯನ ಮಾಡಿ ವೇದಾಭ್ಯಾಸ ಮಾಡಿಸಿದರು. ಸುಮಾರು 11ನೆಯ ವಯಸ್ಸಿನಲ್ಲಿ ಸೇತ್ತೂರಿನಲ್ಲಿದ್ದ ಮುತ್ತಯ್ಯ ಭಾಗವತರ್ ಎಂಬವರ ಬಳಿಗೆ ಮಗನನ್ನು ಕರೆದೊಯ್ದರು. ಅವರು ಬಾಲಕನ ಹಾಡುಗಳನ್ನು ಆಲಿಸಿ ಸೇತ್ತೂರು ಜಮೀನ್ದಾರ್ ಇಂಬವರ ಬಳಿಗೆ ತಂದೆ ಹಾಗೂ ಮಗನನ್ನು ಕರದೊಯ್ದು ಅಲ್ಲಿ ಬಾಲಕನಿಂದ ಹಾಡಿಸಿದರು. ಬಾಲಕನ ಹಾಡಿಕೆಯನ್ನು ಮೆಚ್ಚಿದ ಜಮೀನ್ದಾರರು ಅವನಿಗೆ ನೂರು ರೂಪಾಯಿಗಳ ಬಹುಮಾನವಿತ್ತರು. ಈ ಘಟನೆಯೇ ಅರಿಯಕುಡಿಯವರ ಸಂಗೀತಜೀವನಕ್ಕೆ ನಾಂದಿಯಾಯಿತು. ಆಗ ಪುದುಕೋಟೆಯಲ್ಲಿ ವಾಸಿಸುತ್ತಿದ್ದ ಮಲಯಪ್ಪ ಅಯ್ಯರ್ ಅವರನ್ನು ದೇವಕೋಟೆಗೆ ತಿರುವೇಂಗಡತ್ತಂ ಬರಮಾಡಿಕೊಂಡು ತಮ್ಮ ಮನೆಯಲ್ಲಿಯೇ ಅವರಿಗೆ ವಸತಿಯನ್ನು ಏರ್ಪಡಿಸಿ ಅವರಿಂದ ಮಗ ರಾಮಾನುಜನಿಗೆ ಪ್ರಥಮತಃ ಸಂಗೀತಶಿಕ್ಷಣವನ್ನು ಏರ್ಪಡಿಸಿದರು. ಮೂರು ವರ್ಷಗಳ ಕಾಲ ಶಿಕ್ಷಣ ಪಡೆದ ಮಗನನ್ನು ಆಗ ಶ್ರೀರಂಗದಲ್ಲಿ ವಾಸಿಸುತ್ತಿದ್ದ ನಾಮಕ್ಕಲ್ ನರಸಿಂಹ ಅಯ್ಯಂಗಾರ್ಯರ ಬಳಿಗೆ ಪ್ರೌಢಶಿಕ್ಷಣ ಪಡೆಯಲು ಕಳುಹಿಸಿದರು. ಆಗ ಅರಿಯಕುಡಿಯವರಿಗೆ 16 ವರ್ಷ ವಯಸ್ಸಾಗಿತ್ತು. ನರಸಿಂಹ ಅಯ್ಯಂಗಾರ್ಯರು ಆಗಿನ ಕಾಲಕ್ಕೆ ಪಲ್ಲವಿ ನರಸಿಂಹ ಅಯ್ಯಂಗಾರ್ ಎಂದೇ ಪ್ರಸಿದ್ಧರಾಗಿದ್ದವರು. ಅವರ ಶಿಷ್ಯರ ಪೈಕಿ ಒಬ್ಬರಾದ ನಾಮಕ್ಕಲ್ ಶೇಷ ಅಯ್ಯಂಗಾರ್ಯರ ಸಲಹೆಯಂತೆ ಶ್ರೀರಂಗನಾಥಸ್ವಾಮಿ ದೇವಾಲಯದ ಸಾವಿರಕಂಬಗಳ ಮಂಟಪದಲ್ಲಿ ಪ್ರತಿದಿನ ಬೆಳಗ್ಗೆ ಸಾಧನೆ ಮಾಡಿ ಮಿಕ್ಕವೇಳೆ ಗುರುವಿನ ಬಳಿ ಇದ್ದ ಅರಿಯಕುಡಿಯವರು ಎರಡುವರ್ಷಗಳ ಕಾಲ ಶಿಕ್ಷಣಪಡೆದರು. ಆ ಕಾಲದಲ್ಲಿ ಪ್ರಸಿದ್ಧರಾಗಿದ್ದ ರಾಮಾನಾಥಪುರಂ ಶ್ರೀನಿವಾಸ ಅಯ್ಯಂಗಾರ್ (ರಾಮನಾಡ್ ಶ್ರೀನಿವಾಸ ಅಯ್ಯಂಗಾರ್). ಪೂಚಿ ಶ್ರೀನಿವಾಸ ಅಯ್ಯಂಗಾರ್ ಎಂಬ ಘನವಿದ್ವಾಂಸರಲ್ಲೂ ಅರಿಯಕುಡಿಯವರು ಸಂಗೀತ ಶಿಕ್ಷಣ ಪಡೆದರು. ಆಗ ಅರಿಯಕುಡಿಯವರಿಗೆ 18 ವರ್ಷ ವಯಸ್ಸು. ಹೀಗೆ ಸುಮಾರು 12 ವರ್ಷಗಳ ಕಾಲ ರಾಮನಾಡ್ ಅವರ ಬಳಿ ಪ್ರೌಢಶಿಕ್ಷಣ ಪಡೆದರು. ಈ ಕಾಲದಲ್ಲಿ ಪೂಚಿ ಶ್ರೀನಿವಾಸ ಅಯ್ಯಂಗಾರ್ಯರ ನೆಂಟರ ಮಗಳು ಪೊನ್ನಮ್ಮ ಎಂಬವರೊಂದಿಗೆ ಇವರ ವಿವಾಹವಾಯಿತು.

	ಅರಿಯಕುಡಿಯವರಿಗೆ ಸ್ವತಂತ್ರವಾಗಿ ಸಂಗೀತಕಚೇರಿ ಗಾಯನಮಾಡುವ ಅವಕಾಶ ಇದ್ದಕ್ಕಿಂದಂತೆ ಒದಗಿತು. ತಿರುವೇಂಗಡತ್ತಂ ಅವರಲ್ಲಿ ಅಪಾರಗೌರವ ಇಟ್ಟಿಕೊಂಡಿದ್ದ ದೇವಕೋಟೆಯ ಒಬ್ಬ ಶ್ರೀಮಂತ ಸೋಮಸುಂದರ ಚೆಟ್ಟಿಯಾರ್‍ನ ಮಗನ ವಿವಾಹ ಕಂದನೂರು ಎಂಬಲ್ಲಿ 1912 ಜರುಗಿತು. ಆ ಸಂದರ್ಭದಲ್ಲಿ ಅರಿಯಕುಡಿ ಅವರ ಗುರು ಪೂಚಿ ಶ್ರೀನಿವಾಸ ಅಯ್ಯಂಗಾರ್ಯರ ಗಾಯನ ಕಚೇರಿ ನಡೆಯಿತು. ಗುರುವಿನೊಡನೆ ಶಿಷ್ಯ ಅರಿಯಕುಡಿಯವರೂ ಗಾಯನ ಮಾಡಿದರು. ಮಾರನೆಯ ಬೆಳಗ್ಗೆ ಕೋನೇರಿ ರಾಜಪುರಂ ವೈದ್ಯನಾಥ ಅಯ್ಯರ್ ಅವರ ಗಾಯನವೂ ಜರುಗಿತು. ಅವರ ಕಚೇರಿ ಆದ ಬಳಿಕ ಅರಿಯಕುಡಿಯವರ ಕಚೇರಿ ನಡೆಯಬೇಕೆಂದು ಶಿರುವೇಂಗಡತ್ತಂ ಮತ್ತು ಪೂಚಿ ಶ್ರೀನಿವಾಸ ಅಯ್ಯಂಗಾರ್ಯರ ಒಪ್ಪಿಗೆಯನ್ನು ಸೋಮಸುಂದರ ಚೆಟ್ಟಿಯಾರ್ ಪಡೆದರು. ಹಿರಿಯರೆದುರು ಹಾಡಲು ಹಿಂಜರಿಯುತ್ತಿದ್ದ 22 ವರ್ಷ ವಯಸ್ಸಿನ ಯುವಕ ಅರಿಯಕುಡಿಯನ್ನು ಆ ವಿದ್ವಾಂಸರೇ ವೇದಿಕೆಗೆ ಕರೆತಂದು ಹಾಡಿಸಿದರು. ಹೀಗೆ ಎಲ್ಲ ಹಿರಿಯರಿಂದ ಪ್ರಶಂಸೆಗಳಿಸಿದ ಯುವಕನಿಗೆ ಸ್ವತಂತ್ರವಾಗಿ ಸಂಗೀತಕಚೇರಿ ನಡೆಸಬಹುದೆಂದು ಪೂಚಿ ಶ್ರೀನಿವಾಸ ಅಯ್ಯಂಗಾರ್ಯರು ತಿಳಿಸಿ ಆಶೀರ್ವದಿಸಿದರು.

	ಅರಿಯಕುಡಿಯವರು ಪೂಚಿಯವರಿಂದ ತಮ್ಮ ಶಿಕ್ಷಣವನ್ನು ಮುಂದುವಿರಿಸಿ ಹಿರಿಯವಿದ್ವಾಂಸರ ಕಚೇರಿಗಳನ್ನು ತಪ್ಪದೆ ಕೇಳಿ ತಮ್ಮ ಕೇಳ್ಮೇಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡರು. ಗುರುವಿನ ಬಳಿ ಇದ್ದಾಗ ಅನೇಕ ಸಂಗೀತ ರಚನೆಗಳನ್ನು ಕಲಿತರಲ್ಲದೆ ತಮ್ಮ ಗುರುವಿನ ರಚನೆಗಳನ್ನೂ ಕಲಿತರು. ಹಲವು ಪದಗಳು ಮತ್ತು ಜಾವಳಿಗಳನ್ನು ವೀಣಾಧನಂ ಮತ್ತು ಮೈಲಾಪುರಂ ಗೌರೀ ಅಮ್ಮಾಳ್ ಅವರಿಂದ ಕಲಿತರು. ಜೀವನದುದ್ದಕ್ಕೂ ಹೊಸದನ್ನೆಲ್ಲ ಕಲಿತು ತಮ್ಮ ಸಂಗೀತರಚನೆಗಳ ಭಂಡಾರವನ್ನು ತುಂಬಿಸಿಕೊಂಡರು. 1918ರಲ್ಲಿ ತಿರುವೈಯ್ಯಾರಿನಲ್ಲಿ ಸದ್ಗರು ತ್ಯಾಗರಾಜರ ಆರಾಧನೋತ್ಸವದಲ್ಲಿ ಇವರ ಪ್ರಥಮಗಾಯನ ಕಚೇರಿ ಒದಗಿಸಿತು. ಮತ್ತೊಂದು ಇಂಥವೇ ಅವಕಾಶ ಅದೇ ವರ್ಷ ತಿರುಪರನ್‍ಕುನ್ರಂ ದೇವಾಲಯದ ಉತ್ಸವದಲ್ಲಿ ಲಭಿಸಿತು. 1920ರಲ್ಲಿ ಮದರಾಸಿನ ತಿರುವಲ್ಲಿಕ್ಕೇಣಿಯ ಸರಸ್ವತೀ ಸಂಗೀತಶಾಲೆಯಲ್ಲಿ ಸಂಗೀತ ಕಚೇರಿ ನಡೆಸಿದರು. ತಮ್ಮ 30ನೆಯ ವಯಸ್ಸಿನ ವೇಳೆಗೆ ಇವರ ಗಾಯನ ಕಚೇರಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗತೊಡಗಿತು. ಇವರ ಗುರು ಪೂಚಿ ಶ್ರೀನಿವಾಸ ಅಯ್ಯಂಗಾರ್ಯರು ಮತ್ತು ಒಂದಿಬ್ಬರು ಹಿಂದಿನಿಂದ ಬಂದಿದ್ದ ಕಚೇರಿಯ ಸ್ವರೂಪದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಅರಿಯಕುಡಿಯವರೂ ಅದನ್ನೇ ಮುಂದುವರಿಸಿಕೊಂಡು ಗಾಯನ ಕಚೇರಿಗಳ ಕಾಲಾವಧಿಯನ್ನು ಸ್ವಲ್ಪ ಕಡಿಮೆಮಾಡಿ ಸಂಗೀತಕಚೇರಿಯಲ್ಲಿ ವೈವಿಧ್ಯ ರೂಢಿಗೆ ತಂದರು. ಇವರ ಈ ಕ್ರಮ ಅತ್ಯಂತ ಜನಪ್ರಿಯತೆ ಗಳಿಸಿದುದಲ್ಲದೆ ಬಹುಸಂಖ್ಯಾತರಿಂದ ಸ್ವಾಗತಾರ್ಹವಾಯಿತು ಕೂಡ. ಆಗಿನ ಕಾಲೇಜು ವಿದ್ಯಾರ್ಥಿಗಳು ಇವರು ಜನಪ್ರಿಯಗೊಳಿಸಿದ ಶಾಸ್ತ್ರೀಯ ಮತ್ತು ಲಘುಶಾಸ್ತ್ರೀಯ ಹಾಡುಗಳನ್ನು ಚಲನಚಿತ್ರದ ಹಾಡುಗಳಿಗೆ ಬದಲಾಗಿ ಹಾಡಿಕೊಳ್ಳುತ್ತಿದ್ದರು. ಇವರ ಹಾಡುಗಾರಿಕೆ ಮನೋಹರವಾಗಿದ್ದು, ಸೊಗಸಿನಿಂದಲೂ ಆಕರ್ಷಣೆಯಿಂದಲೂ ಕೂಡಿತ್ತು. ಕೃತಿ, ರಾಗ, ಸ್ವರ, ಪಲ್ಲವಿ ಇತರ ವಿವಿಧ ರಚನೆಗಳು ಯಾವುದನ್ನೇ ಹಾಡಿದರೂ ಪ್ರತಿಯೊಂದರಲ್ಲೂ ಅರಿಯಕುಡಿಯವರ ಸಂಗೀತದ ಛಾಪನ್ನು ಕಾಣಬಹುದಿತ್ತು. ಇವರ ಕಂಠಶ್ರೀ ಭವ್ಯವಾಗಿಲ್ಲದಿದ್ದರೂ ಪಕ್ವವಾಗಿ ಇಂಪಾಗಿದ್ದು ಅನುನಾದದಿಂದ ಕೂಡಿತ್ತು ಮತ್ತು ಅವರ ಗಾಯನದ ಸೊಬಗನ್ನು ಮೆರೆಸುತ್ತಿತ್ತು. ಸರಳತೆ, ಲಾಲಿತ್ಯ, ಗಮಕಯುಕ್ತವಾಗಿರುವುದು, ಗಹನತೆ, ಸೊಬಗು ಇವರ ಶೈಲಿಯ ಪ್ರಮುಖ ಲಕ್ಷಣಗಳಾಗಿದ್ದವು. ಸಂಪ್ರದಾಯವನ್ನು ಕಾಪಾಡಿಕೊಂಡು ಬಂದರೂ ಇವರ ನೂತನ ಮಾರ್ಗ ಪ್ರವರ್ತಕರಾಗಿದ್ದರು. ಆಗಿನ ಕಾಲದ ಮತ್ತೊಬ್ಬ ಸಂಗೀತ ವಿದ್ವಾಂಸರಾದ ಜಿ.ಎನ್. ಬಾಲಸುಬ್ರಹ್ಮಣ್ಯಂ ಅವರು `ಅರಿಯಕುಡಿಯವರು ಆಧುನಿಕ ಕರ್ನಾಟಕ ಸಂಗೀತ ಶಿಲ್ಪ; ಅವರ ಸಂಗೀತವು ಶಾಸ್ತ್ರ, ಶ್ರಾವ್ಯತೆ, ಸಂಪ್ರದಾಯ ಮತ್ತು ಆಧುನಿಕತೆಗಳ ಮಧುರ ಸುಗಮವಾಗಿತ್ತು ಎಂಬರ್ಥ ಬರುವ ಮಾತುಗಳನ್ನು ಆಡಿದ್ದಾರೆ. ಇವರ ಶೈಲಿ ಮಧ್ಯಮಾರ್ಗ ಅಥವಾ ಸುವರ್ಣಮಾರ್ಗವಾಗಿತ್ತು. ಸಾಹಿತ್ಯದ ಯಾವ ಭಾಗವನ್ನೇ ಆಗಲಿ ವಿಪರೀತವಾಗಿ ವಿಸ್ತರಿಸಿ ಹಾಡುತ್ತಿರಲಿಲ್ಲ. ಎಲ್ಲವನ್ನೂ ಹಿತ ಮತ್ತು ಮಿತವಾಗಿ, ಗಮಕಯುಕ್ತವಾಗಿ ಸಾರವತ್ತಾಗಿ, ಪಾಂಡಿತ್ಯ ಪೂರ್ಣವಾಗಿ ಅಚ್ಚುಕಟ್ಟಾಗಿ ಹಾಡುತ್ತಿದ್ದರು. ರಾಗಗಳ ಆಲಾಪನೆಯಲ್ಲಿ ಆಯಾರಾಗಗಳ ಸಾರವತ್ತಾದ ಸೊಗಸು ಎದ್ದು ಕಾಣುವಂತೆ 3-4 ಮಿನಿಟುಗಳಕಾಲ ಹಾಡಿ ಅವುಗಳ ಸ್ವರೂಪವನ್ನು ತೋರಿಸಿ ತೃಪ್ತಿಪಡಿಸುತ್ತಿದ್ದರು. ಸಾಧಾರಣವಾಗಿ ಯಾವ ರಾಗದ ವರ್ಣದಿಂದ ಕಚೇರಿಯ ಗಾಯನವನ್ನು ಆರಂಭಿಸುತ್ತಿದ್ದರೋ ಆ ರಾಗದಲ್ಲೇ ರಾಗ, ತಾನ, ಪಲ್ಲವಿಯನ್ನು ಹಾಡುತ್ತಿದ್ದರು. ಇವರು ವರ್ಣವಿಲ್ಲದೆ ಕಚೇರಿ ಆರಂಭಿಸುತ್ತಿರಲಿಲ್ಲ. ಮಧ್ಯಮಕಾಲದ ಕೃತಿಗಳು, ಶುದ್ಧಮಧ್ಯಮ ರಾಗಗಳು, ಪ್ರತಿಮಧ್ಯಮದ ಕೃತಿಗಳು ವಿಳಂಬಕಾಲದ ಕೃತಿಗಳು ಎಲ್ಲವನ್ನೂ ಸಮಯೋಚಿತವಾಗಿ ಹಾಡುತ್ತಿದ್ದರು. ಕಚೇರಿಗಳಲ್ಲಿ ಪ್ರಾರಂಭದಿಂದಲೇ ಸಂಗೀತ ವಾತಾವರಣವನ್ನು ನಿರ್ಮಿಸಿ, ಒಂದಾದಬಳಿಕ ಇನ್ನೊಂದು ರಚನೆಯನ್ನು ಮಧ್ಯದಲ್ಲಿ ವಿರಾಮವಿಲ್ಲದೆ ಅವ್ಯಾಹತವಾಗಿ 4 ಗಂಟೆಗಳ ಕಾಲ ಹಾಡುತ್ತಿದ್ದರು. ಇವರ ಕಚೇರಿಗಳಲ್ಲಿ ಹಲವು ವಾಗ್ಗೇಯಕಾರರ ಕೃತಿಗಳು ರಾಗ, ತಾನ, ಪಲ್ಲವಿ, ಚೌಕಕಾಲ ಪಲ್ಲವಿ, ರಾಗಮಾಲಿಕಾ ಪಲ್ಲವಿ, ಅನಂತರ ದೇವರನಾಮ, ಜಾವಳಿ, ತಿಲ್ಲಾಣ, ರಾಗಮಾಲಿಕೆಯಲ್ಲಿ ಶ್ಲೋಕ, ತಿರುಪ್ಪಾವೈ-ಹೀಗೆ ಎಲ್ಲವೂ ಇರುತ್ತಿದ್ದವು. ಪಕ್ಕವಾದ್ಯ ವಿದ್ವಾಂಸರೊಡನೆ ವ್ಯರ್ಥವೆನಿಸುವ ಗಣಿತ ಮತ್ತು ಗದ್ದಲಮಯವೆಂದೆನಿಸುವ ಗುದ್ದಾಟ ಮಾಡುತ್ತಿರಲಿಲ್ಲ. ವೇದಿಕೆಯ ಅನುಭವವನ್ನು ಆಗತಾನೆ ಪಡೆಯುತ್ತಿದ್ದ ತರುಣ ಪಕ್ಕವಾದ್ಯ ವಿದ್ವಾಂಸರೊಡನೆ ಸಹಕರಿಸಿ ಕಚೇರಿಯನ್ನು ಯಶಸ್ವಿಯಾಗಿಸುತ್ತಿದ್ದರು. ಹಿತಮಿತವಾಗಿ, ಗಮಕಯುಕ್ತವಾಗಿ, ವಿದ್ವತ್ಪೂರ್ಣವಾಗಿ, ಕಲಾತ್ಮಕವಾಗಿ ವೈವಿಧ್ಯಮಯವಾಗಿರುವ ಇವರ ಗಾಯನ ಶೈಲಿಗೆ ಅರಿಯಕುಡಿ ಶೈಲಿ ಎನ್ನುವುದು ರೂಢಿಯಾಯಿತು.

	ವಿವಿಧ ರೀತಿಯ ಸಂಗೀತರಚನೆಗಳನ್ನು ತಿಳಿದಿದ್ದ ಪ್ರಯೋಗ ಕುಶಲರಾದ ಅರಿಯಕುಡಿಯವರು ಹಲವು ಕೃತಿಗಳಿಗೆ, ರಚನೆಗಳಿಗೆ ಸ್ವರಮಟ್ಟು ಹಾಕಿ ಅವನ್ನು ಪ್ರಕಟಿಸಿದ್ದಾರೆ. ಅಂಡಾಳ್ ದೇವಿಯ ತಿರುಪ್ಪಾವೈಯ ಮೂವತ್ತು ಹಾಡುಗಳನ್ನು ಸ್ವರಪಡಿಸಿ, ಹಾಡಿ ಅವುಗಳ ಸೌಂದರ್ಯವನ್ನು ತೋರಿಸಿಕೊಟ್ಟಿದ್ದಾರೆ. ಅರುಣಾಚಲ ಕವಿರಾಯರ (1711-88) ರಾಮನಾಟಕಂ ಎಂಬ ಗೇಯನಾಟಕದ ರಚನೆಗಳನ್ನು ಸ್ವರಪಡಿಸಿ ಪ್ರಚುರಪಡಿಸಿದರು. ತೋಡಿರಾಗ, ವರಾಳಿ, ನಾಟ, ಕಾಂಭೋಜೀ, ಅಠಾಣ ಮುಂತಾದ ರಾಗಗಳನ್ನು ಸೊಗಸಾಗಿ ಹಾಡುವುದರಲ್ಲಿ ಅದವಿತೀಯರಾಗಿದ್ದರು. ಸದ್ಗುರು ತ್ಯಾಗರಾಜರ ಪಂಚರತ್ನ ಕೃತಿಗಳನ್ನು ಹಾಡುವ ಶೈಲಿಗೆ ಮಾರ್ಗದರ್ಶಕರಾಗಿದ್ದರಲ್ಲದೆ, ಅವರ ಹಲವು ಕೃತಿಗಳನ್ನು ಹಾಡುವುದರಲ್ಲಿ (ಉದಾ: ಅನುಪಮ ಗುಣಾಂಬುದಿ (ಅಠಾಣ), ಎವರಿಮಾಟ (ಕಾಂಭೋಜಿ), ದಾಶರಥಿ ಮತ್ತು ರಾಜವೆಡಲ (ತೋಡಿ); ದೀಕ್ಷಿತರ ಶ್ರೀ ಸುಬ್ರಹ್ಮಣ್ಯ (ಕಾಂಭೋಜಿ), ಶೇಷಾಚಲ ನಾಯಕಂ (ವರಾಳಿ)) ತಮ್ಮದೇ ಆದ ಶೈಲಿ ಮತ್ತು ರೀತಿಯಲ್ಲಿ ಸ್ಥಾಪಿಸಿದರು.

	ಅರಿಯಕುಡಿಯವರ ಕಚೇರಿಗಳಿಗೆ ಪ್ರಾರಂಭದ ವರ್ಷಗಳಲ್ಲಿ ಮದರಾಸು ಬಾಲಕೃಷ್ಣಯ್ಯರ್ (ಪಿಟೀಲು), ಮದರಾಸು ವೇಣುನಾಯಕರ್ (ಮೃದಂಗ) ಪಕ್ಕವಾದ್ಯ ವಿದ್ವಾಂಸರಾಗಿರುತ್ತಿದ್ದರು. ಅಯ್ಯಂಗಾರ್-ಅಯ್ಯರ್-ನಾಯಕರ್ ಈ ತ್ರಿವೇಣೀ ಸಂಗಮ ಬಲು ಜನಪ್ರಿಯವಾಗಿತ್ತು. ಮೈಸೂರು ಟಿ.ಚೌಡಯ್ಯ, ಫಾಲ್‍ಘಾಟ್ ಮಣಿಅಯ್ಯರ್, ಅನಂತರ ಟಿ.ಎನ್.ಕೃಷ್ಣನ್ ಇವರ ಪಕ್ವವಾದ್ಯಗಳ ಕಚೇರಿಗಳು ಹೆಚ್ಚಾಗಿರುತ್ತಿದ್ದವು. ಪಾಪಾವೆಂಕಟರಾಮಯ್ಯ, ಫಾಲ್‍ಘಾಟ್ ರಘು, ಪಳನಿ ಸುಬ್ರಹ್ಮಣ್ಯಪಿಳ್ಳೆ, ಲಾಲ್ಗುಡಿ ಜಯರಾಮನ್ ಮುಂತಾದ ಪ್ರಮುಖ ವಿದ್ವಾಂಸರೆಲ್ಲ ಇವರ ಗಾಯನಕ್ಕೆ ಪಕ್ಕವಾದ್ಯ ನುಡಿಸಿದ್ದಾರೆ.

	ಅರಿಯಕುಡಿಯವರಿಗೆ ಸಂದ ಬಿರುದುಗಳು, ಸನ್ಮಾನಗಳು ಅನೇಕ.  ಸರ್ ರತ್ನಾಕರ (1932). ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ ಇವರಿಗೆ 1946 ಗಾಯಕ ಶಿಖಾಮಣಿ. 1947ರಲ್ಲಿ ಮದರಾಸಿನ ಇಂಡಿಯನ್ ಫೈನ್ ಆಟ್ರ್ಸ್ ಸೊಸೆ ನೀಡಿದ ಸಂಗೀತ ಕಲಾಶಿಖಾಮಣಿ, 1938ರಲ್ಲಿ ಮದರಾಸು ಮ್ಯೂಸಿಕ್ ಅಕೆಡಮಿಯ ಸಂಗೀತ ಕಲಾನಿಧಿ. 1958ರಲ್ಲಿ ರಾಷ್ಟ್ರಾಧ್ಯಕ್ಷರಿಂದ ಪದ್ಮಭೂಷಣ ಇವುಗಳ ಪೈಕಿ ಕೆಲವು. ಇದಲ್ಲದೆ 1952ರಲ್ಲಿ ಸಂಗೀತ ನಾಟಕ ಅಕೆಡೆಮಿಯ ಪ್ರಶಸ್ತಿ ಲಭಿಸಿತು. 1960ರಲ್ಲಿ ಮದರಾಸಿನ ತಮಿಳ್ ಇಸೈ ಸಂಘಂ, ಇಸೈ ಪೇರರಿಜ್ಞರ್ ಎಂಬ ಪ್ರಶಸ್ತಿ ನೀಡಿ ಗೌರವಿಸಿತು. ಅರಿಯಕುಡಿಯವರು 19 ಜನವರಿ 23ರಂದು ನಿಧನರಾದರು.

	ಅರಿಯಕುಡಿಯವರ ಶಿಷ್ಯವೃಂದದಲ್ಲಿ ಪ್ರಮುಖರಾದವರೆಂದರೆ ಬಿ. ಅಯ್ಯರ್. ಫಾಲ್‍ಘಾಟ್ ಕೆ.ವಿ. ನಾರಾಯಣಸ್ವಾಮಿ, ಮಧುರೈ ಎನ್. ಕೃಷ್ಣನ್ ಮತ್ತು ಕೆ.ಎಸ್. ಧನಮ್ಮಾಳ್, ಅರಿಯಕುಡಿಯವರು ಮದರಾಸಿ ತಮಿಳ್ ಇಸೈ ಸಂಘದ ಮ್ಯೂಸಿಕ್ ಕಾಲೇಜಿನ ಪ್ರಥಮ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

	ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಹಿರಿಯರೂ ಪ್ರಸಿದ್ಧರೂ ಆಗಿರುವ ಶೆಮ್ಮಂಗುಡಿ ಶ್ರೀನಿವಾಸಯ್ಯರ್ ಅವರು ಅರಿಯಕುಡಿಯವರ ಬಗ್ಗೆ ತಿಳಿಸುತ್ತ ``ಅರಿಯಕುಡಿ ರಾಮಾನುಜ ಅಯ್ಯಂಗಾರ್‍ರಿಂದ ನಾನು ಬಹಳ ಪ್ರಭಾವಿತನಾಗಿದ್ದೇನೆ. ನನಗೆ ಇನ್ನೊಂದು ಜನ್ಮ ಬೇಡ, ಒಂದು ವೇಳೆ ಅದು ಇದ್ದಲ್ಲಿ ನಾನು ರಾಮಾನುಜ ಅಯ್ಯಂಗಾರ್ಯರಂತೆ ಹಾಡಬೇಕೆಂದು ನನ್ನ ಆಸೆ ಎಂಬರ್ಥ ಬರುವಂಥ ಮಾತುಗಳನ್ನು ಆಡಿದ್ದಾರೆ. 							
(ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ